ಏನು ಮನುಷ್ಯ ಜನ್ಮದ ಉದ್ದೇಶ ?
ನದಿಯೆಲ್ಲೇ ಹುಟ್ಟಲಿ ಕೊನೆಗೆ ಸೇರುವುದು ಸಾಗರವನ್ನೇ.ಮನುಷ್ಯನೆಷ್ಟೇ ದೊಡ್ಡವನಾಗಿರಲಿ ಕೊನೆಗೆ ಸೇರುವುದು ಮಸಣವನ್ನೇ..!!
ಜಾತಸ್ಯ ಹಿ ಧ್ರುವೋ ಮೃತ್ಯುಃ.ಹುಟ್ಟಿದ ಕೂಡಲೇ ಸಾವು ನಿಶ್ಚಯ.ಮೃತ್ಯು ಯಾರನ್ನು ಕೇಳಿ,ಅಂಗಲಾಚಿ ಬರುವುದಿಲ್ಲ.ಸಾವಿರದ ಮನೆಯ ಸಾಸಿವೆಯೇ ಇಲ್ಲ.ಆದರೂ ಎಂತಹ ಮೂಢರು ನಾವು.ಸಾವನ್ನೇ ಮರೆತು,ಪ್ರಪಂಚದ ವೈಭೋಗದಲ್ಲಿ ಮನುಷ್ಯ ಜನ್ಮದ ಉದ್ದೇಶವನ್ನೇ ಮರೆತು ಜೀವಿಸುತ್ತಿದ್ದೇವೆ..!!
ಪುನರ್ಜನ್ಮವನ್ನು ನಂಬುವವರು ನಾವು.ಹಾಗಾಗಿ ಎಲ್ಲ ಜನ್ಮಗಳಲ್ಲೂ ಮನುಷ್ಯಜನ್ಮವೇ ಶ್ರೇಷ್ಟ.”ಜಂತೂನಾಂ ನರಜನ್ಮ ದುರ್ಲಭಮ್”.ಈ ಮನುಷ್ಯ ಜನ್ಮ ಬಹಳ ಸುಲಭವಾಗಿ ಸಿಕ್ಕಿದ್ದಲ್ಲ ಸ್ವಾಮೀ. ಹಲವಾರು ಜನ್ಮಗಳ ಪುಣ್ಯದ ಫಲ. ಭಗವಂತ ಮನುಷ್ಯನಿಗಷ್ಟೇ ವಿಶೇಷವಾದ ಜ್ಞಾನವನ್ನು ಕೊಟ್ಟ.ಜಗತ್ತಿನ ಸಕಲ ಚರಾಚರಗಳನ್ನು ನಿರ್ವಹಿಸುವ ದೊಡ್ಡ ಜವಾಬ್ದಾರಿ ಕೊಟ್ಟ.ಆದರೆ ಆ ಜವಾಬ್ದಾರಿಯನ್ನು ನಾವು ಸರಿಯಾಗಿ ನಿರ್ವಹಿಸುತ್ತಿದ್ದೇವಾ..?ಪ್ರಾಣಿಗಳೂ ಕಚ್ಚಾಡುತ್ತವೆ.ಹಾಗೇ ನಾವೂ ಕಚ್ಚಾಡುತ್ತಿದ್ದೇವೆ.ಅಂದಮೇಲೆ ಮನುಷ್ಯನಿಗೂ,ಪ್ರಾಣಿಗಳಿಗೂ ಏನು ವ್ಯತ್ಯಾಸ..?
ಹಾಗಾದರೆ,ಮನುಷ್ಯಜನ್ಮದ ಉದ್ದೇಶ..?ಸುಖೋಪಭೋಗವೇ...?ಕೇವಲ ಅದಕ್ಕಾಗಿಯೇ ಇಲ್ಲಿಗೆ ಬಂದಿದ್ದೇವೆಯೇ..?ತಿಂದುಂಡು ಮಜಾ ಮಾಡಿ,ಯಾರಿಗೂ ಕೊಡದೇ ಶೇಖರಿಸಿ ಕೊನೆಗೆ ಬರಿಗೈಯ್ಯಲ್ಲಿ ನಡೆಯುವುದೇ..?
ಖಂಡಿತಾ ಅಲ್ಲ..
ಮನುಷ್ಯಜನ್ಮ ಸಾರ್ಥಕ್ಯವನ್ನು ಪಡೆಯಬೇಕು..ಅದಕ್ಕೇನು ಮಾಡಬೇಕು..? ಅದಕ್ಕೊಂದೇ ಪರಿಹಾರ ಆಧ್ಯಾತ್ಮ.ಆಧ್ಯಾತ್ಮವೆಂದರೆ ಅತ್ಮಕ್ಕೆ ಅಧೀನನಾಗಿರುವುದು.ಆಧ್ಯಾತ್ಮವೆಂಬುದು ಪುಸ್ತಕದ ಬದನೆಕಾಯಿ ಎಂಬುದು ಹಲವರ ವಾದ.“ಆಧ್ಯಾತ್ಮ ಕೇವಲ ವಯಸ್ಸಾದವರಿಗೆ” ತಪ್ಪು ಅಭಿಪ್ರಾಯ.ಆದರೆ,ಮನುಷ್ಯನಲ್ಲಿ ಇರಲೇಬೇಕದ ವಸ್ತು ಆಧ್ಯಾತ್ಮ ಚಿಂತನೆ. ಅಷ್ಟಕ್ಕೂ ಏನಿದೆ ಈ ಬದುಕಿನಲ್ಲಿ..?
ಅಧಿಕಾರವಿರುವವರು ಹೇಳಬಹುದು,ಅಧಿಕಾರವಿದೆ.ಹಣವಿರುವವರು ಹೇಳಬಹುದು,ಹಣವಿದೆ.ನೂರು ಜನ ನೂರು ಕಾರಣಗಳನ್ನು ಹೇಳಬಹುದು.ನಿಜ..ಎಲ್ಲವೂ ಇದೆ.ಆದರೆ ಮನದಲ್ಲಿ ಅವ್ಯಕ್ತ ಆನಂದವಿಲ್ಲ.ಆ ಅವ್ಯಕ್ತ ಆನಂದವೆಲ್ಲಿ ಸಿಗಬಹುದು..?
ನಿಜ ಅದು ಕೇವಲ ಆಧ್ಯಾತ್ಮದಲ್ಲಿ. ನಮ್ಮ ದಾರ್ಶನಿಕರ ಪ್ರಕಾರ ಶರೀರ,ಪಂಚೇಂದ್ರಿಯಗಳು,ಮನಸ್ಸು ಪ್ರಮುಖವಲ್ಲ.ಹೆಚ್ಚಿನ ಪ್ರಾಮುಖ್ಯತೆ ಆತ್ಮಕ್ಕೇ.“ಆತ್ಮಾ ಏವ ಸತ್” ಆತ್ಮವನ್ನು ಸಮೀಪಿಸುವುದು ಆಧ್ಯಾತ್ಮ. ಆತ್ಮಕ್ಕೆ ಸುಖವಿಲ್ಲ,ಕಷ್ಟವಿಲ್ಲ,ಸಾವು,ನೋವುಗಳೂ ಇಲ್ಲ.ಆತ್ಮವನ್ನು ಅರಿತವನಿಗೂ ಸುಖದುಃಖಗಳಿಲ್ಲ.ಆತ್ಮವನ್ನು ಅರಿತವನು ಆತ್ಮತತ್ವಜ್ಞಾನಿ.ಆತ್ಮತತ್ವಜ್ಞಾನಿಗೆ ಭಯ,ದುಃಖ,ನೋವುಗಳಿಲ್ಲ.ಆತ ಸದಾನಂದ.ಅಂತವರಿಗೆ ಈ ಪ್ರಪಂಚ,ಚರಾಚರವಸ್ತುಗಳಲ್ಲಿ ಬೇಧವಿಲ್ಲವೆನಿಸುತ್ತದೆ.ಸಮಸ್ತ ವಿಶ್ವವೂ ನಮ್ಮದೆಂದೆನಿಸುತ್ತದೆ.ಅಂತಹ ಆತ್ಮತತ್ವಜ್ಞಾನವನ್ನರಿಯುವ ಪ್ರಯತ್ನ ನಮ್ಮದಾಗಿರಲಿ
Comments
Post a Comment