ಒಮ್ಮೆ ಶಿಷ್ಯರೊಬ್ಬರು ಸದ್ಗುರುಗಳ ಬಳಿ ತಮಗೆ ಹೆಚ್ಚು ಸಮಯ ಧ್ಯಾನ, ಜಪಾದಿಗಳಿಗೆ ಕುಳಿತುಕೊಳ್ಳಲು ಆಗುತ್ತಿಲ್ಲ ಎಂದು ಹೇಳಿಕೊಂಡರು.
ಅದಕ್ಕೆ ಪ್ರತಿಯಾಗಿ ಸದ್ಗುರುಗಳು ಹೀಗೆ ನುಡಿದರು_
ಗುರುವು ಹೇಳಿದ್ದಾನೆ ಎಂಬ ಕಾರಣಕ್ಕೆ ಸಾಧನೆ ಮಾಡು ಸಾಕು. ಗುರುಗಳು ಹೇಳಿದ್ದನ್ನು ಶಿಷ್ಯನು ಮಾಡುತ್ತಾನೆಯೇ ಇಲ್ಲವೇ ಎಂಬುದನ್ನು ಗುರು ಪರೀಕ್ಷಿಸುತ್ತಾನೆ ಅಷ್ಟೆ. ಸಾಧನೆಯೆಂದರೆ ಯೋಗಾಸನ-ವ್ಯಾಯಾಮಗಳಲ್ಲ. ಕೇವಲ ಶರೀರದಂಡನೆಯೂ ಸಾಧನೆಯಲ್ಲ. ಮನಸ್ಸಿನಿಂದ ಆ ಗುರು ಹೇಳಿದಂತೆ ಮಾಡು. ಗುರುವು ನಿನ್ನಿಂದ ಹೆಚ್ಚಿನದೇನನ್ನೂ ಬಯಸುವುದಿಲ್ಲ.
ಉತ್ತಮ ಸಾಧಕ ಎಂದೂ ಕುಟುಂಬಕ್ಕಾಗಲೀ ಸಮಾಜಕ್ಕಾಗಲೀ ಕಂಟಕನಾಗುವುದಿಲ್ಲ. ಏಕೆಂದರೆ ಅವನಿಗೆ "ತನಗೋಸ್ಕರ" ಎಂಬ ಯಾವ ಅಪೇಕ್ಷೆ ಇರುವುದಿಲ್ಲ. ಆ ನಿರಪೇಕ್ಷತೆಯನ್ನೇ ಗುರುವು ಆತನಿಗೆ ಉಪದೇಶಿಸಿರುತ್ತಾನೆ. ಉತ್ತಮ ಸಾಧಕನಿಗೆ ತಾನೊಬ್ಬ ವಿಶೇಷ, ಪ್ರತ್ಯೇಕ ಎಂಬಿತ್ಯಾದಿ ಗುಂಗು ಇರುವುದಿಲ್ಲ. ಮನೆಯಲ್ಲಿ ನಿನ್ನ ಪತ್ನಿ ಮಂಚ ಬೇಕು ಎಂದರೆ ಪ್ರೀತಿಯಿಂದ ಕೊಡಿಸು, ಆದರೆ "ತನಗೆ" ಎಂದು ಮಾಡಿಕೊಳ್ಳಬೇಡ. ನಿನಗೆ ಎಲ್ಲಿ ಮಲಗಿದರೂ ನಡೆದೀತು. ನೆಲವಾದರೂ ಸಾಕು. ಒಟ್ಟಾರೆ ಇಂತಹುದೇ ಆಗಬೇಕೆಂದು ಬಯಸಬೇಡ. ಮನೆಯಲ್ಲಿ ನಾಲ್ಕು ಜನರು ಇರುತ್ತಾರೆ. ಅವರನ್ನೆಲ್ಲ ಯಾವಾಗಲೂ ವಿರೋಧಿಸಬೇಡ. "ತನಗೆ ಇಲ್ಲ" ಎಂದೆಲ್ಲ ಚಿಂತೆ ಮಾಡಬೇಡ. ಅದರಿಂದ ಬೇರೆಯವರೂ ಸುಖದಲ್ಲಿ ಇರುತ್ತಾರೆ. ನಿನಗೆ ಏನೂ ಬೇಡ ಎಂದಾದಾಗ ಸಹಜವಾಗಿಯೇ ಬೇರೆಯವರೂ ಸಮಾಧಾನದಲ್ಲಿ ಇರುತ್ತಾರೆ. ಹೊರಗೆ ಯಾರೋ ಭಿಕ್ಷುಕ "ಭಿಕ್ಷಾಂದೇಹಿ" ಎಂದರೆ ನಿನ್ನ ಬಟ್ಟಲಲ್ಲಿ ಇದ್ದ ಅನ್ನವನ್ನು ಸ್ವಲ್ಪ ಅವನಿಗೆ ಹಾಕು. ಆದರೆ ಬೇರೆಯವರ ಹತ್ತಿರ ತನಗೆ ಹಾಕು ಎಂದು ಹೇಳಬೇಡ. ಆಗ ನಿನ್ನ ತ್ಯಾಗದಿಂದ ಬೇರೆಯವರಿಗೆ ತೊಂದರೆ ಆಗುವುದಿಲ್ಲ. ನಿನಗೆ ಊಟಕ್ಕೆ ಇಂತಹುದೇ ಪದಾರ್ಥ ಬೇಕು ಎಂದೆಲ್ಲ ಇಟ್ಟುಕೊಳ್ಳಬೇಡ. ಏನಿದೆಯೋ ಅದರಲ್ಲಿ ಹೊಟ್ಟೆತುಂಬ ಊಟ ಮಾಡು. ಆಗ ಬೇರೆಯವರಿಗೆ ಬೇಸರವಾಗುವುದಿಲ್ಲ.
ಒಟ್ಟಾರೆ "ತನಗೋಸ್ಕರ" ಎಂದು ಬದುಕಿದರೆ ನೀನು ಈ ಸಂಸಾರದಲ್ಲಿ ಸಿಕ್ಕಿಬೀಳುತ್ತೀಯಾ. ತನಗೆ ಬೇಡವೆಂಬ ರೀತಿಯಲ್ಲಿ ಸಾಧನೆ ಮಾಡುವುದರಿಂದ ನೀನು ಇದಕ್ಕೆ ಅಂಟಿಕೊಳ್ಳುವುದಿಲ್ಲ. ಆಗ ಈ ಪ್ರಪಂಚವೇ ಸತ್ಯ ಎಂಬ ಭ್ರಮೆ ನಿನಗೆ ಇರುವುದಿಲ್ಲ. ನೋಡು! ಈ ಜಗತ್ತಿನಲ್ಲಿ ನೀನಂದುಕೊಂಡಂತೆ ಏನೂ ನಡೆಯುವುದಿಲ್ಲ. ನಿನ್ನಿಂದ ಕೂದಲು ಹಣ್ಣಾಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಚರ್ಮ ಸುಕ್ಕುಗಟ್ಟುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅಂದ ಮೇಲೆ ನೀನು ಇಲ್ಲಿ ಏನನ್ನು ಸಾಧಿಸುತ್ತೀಯಾ?
ಸಾಧಕನಾದವನು ಏನನ್ನೂ ನಿರೀಕ್ಷಿಸುವುದಿಲ್ಲ. ಮಕ್ಕಳನ್ನು ಬೆಳೆಸುವ ಕಾಲಕ್ಕೆ ನೀನು ಅವರಿಂದ ಏನನ್ನೂ ನಿರೀಕ್ಷಿಸಬೇಡ. ಒಳ್ಳೆಯ ಸಂಸ್ಕಾರವನ್ನು ಅವರಿಗೆ ಕೊಡಲು ಪ್ರಯತ್ನಿಸು ಅಷ್ಟೆ. ನಿತ್ಯ ಹಿರಿಯರಿಗೆ ನಮಸ್ಕಾರ ಮಾಡಿಸು. ಅದೊಂದು ಶಾಸ್ತ್ರ (ಶುದ್ಧ ವಿಜ್ಞಾನ). ಆ ರೀತಿ ಮಾಡಿಸುವುದರಿಂದ ಅವರು ಹಿರಿಯರನ್ನು ಗೌರವಿಸುತ್ತಾರೆ. ಸಮಯಕ್ಕೆ ಸರಿಯಾಗಿ ಸಂಧ್ಯಾವಂದನೆ ಮಾಡಿಸು. ಒಳ್ಳೆಯ ಸಂಸ್ಕಾರವಂತನಾಗಲಿ, ಪರಮಾತ್ಮನಿಗೆ ಪ್ರೀತಿಯಾಗುವಂತೆ ನಡೆದುಕೊಳ್ಳಲಿ ಎಂದು ಬಯಸು. ತಪ್ಪಲ್ಲ. ಆದರೆ ಅವರ ಮೇಲೆ ಒತ್ತಡ ಹೇರಬೇಡ. ಪ್ರಪಂಚದಲ್ಲಿ ಪ್ರತಿಯೊಬ್ಬರೂ ಸ್ವತಂತ್ರ ಕರ್ಮದ ಪಿಂಡಗಳೇ. ನಿನ್ನ ಮಗನು ನೀನು ಹೇಳಿದಂತೆ ಕೇಳಲೆಂದೇ ಹುಟ್ಟಿಲ್ಲ. ಅವನಿಗೆ ಅವನದ್ದೇ ಆದ ಕರ್ಮವಿದೆ. ಆದರೆ ಅದು ನಿನ್ನ ಕರ್ಮ ಖರ್ಚಾಗಲು ಅನುಕೂಲವಾಗುವ ಹಾಗೆ ಬಂದಿರುತ್ತದೆ. ನೀನು ಅವನ ಮೇಲೆ ಒತ್ತಡ ಹೇರುವುದರಿಂದ (ಅವನು ನಿನಗೆ ಬೇಕಾದಂತೆಯೇ ಬದುಕಿದರೆ) ನಿನ್ನ ಕರ್ಮ ವ್ಯಯವಾಗುವುದಿಲ್ಲ. ಆಗ ನಿನ್ನ ನಿರೀಕ್ಷೆ ಪರಮಾತ್ಮನ ಶಾಸನದ ವಿರುದ್ಧ ಆದಂತಾಯಿತು. ಯಾರೋ ಹೇಳುತ್ತಾರೆ, ತನ್ನ ಮಗ ಮೊದಲನೇ ಸ್ಥಾನದಲ್ಲೇ ತೇರ್ಗಡೆಯಾಗುತ್ತಿಲ್ಲ ಎಂದು. ಆ ಸಾಮರ್ಥ್ಯ ಅವನಿಗೆ ಇಲ್ಲದೇ ಇರಬಹುದು. ಅದರಿಂದಲೇ ಒಳ್ಳೆಯದಾಗುತ್ತದೆ ಎಂದೆಲ್ಲ ಇಲ್ಲವಲ್ಲ, ಕೃಷಿಯನ್ನು ಕೂಡ ಮಾಡಬಹುದು. SSLC, PUC ಮಕ್ಕಳೆಲ್ಲಾ FAIL ಆದಾಗ ಆತ್ಮಹತ್ಯೆ ಮಾಡಿಕೊಳ್ಳುವುದೂ ಈ ರೀತಿಯ ಒತ್ತಡಗಳಿಂದಲೇ. ಇಂತವರ ಮಧ್ಯೆ ಬದುಕುವುದಕ್ಕಿಂತ ಅವರಿಗೆ ಸಾವೇ ಒಳ್ಳೆಯದಾಗಿ ಕಂಡುಬಿಡುತ್ತದೆ. ಹಾಗೆಲ್ಲ ಒತ್ತಡ ಹೇರಬೇಡ. ಸರಳವಾಗಿ ಬದುಕುವ ಸಾಧಕ ತಂದೆ-ತಾಯಿಯರನ್ನು, ಹಿರಿಯರನ್ನು ಗೌರವಿಸುತ್ತಾನೆ. ಅದೇ ಸಾಧನೆಯಾಗುತ್ತದೆ.
ನೆನಪಿಡು, "ಸಾಧನೆಯೆಂದರೆ ಕೇವಲ ಜಪ ಮಾಡುವುದೊಂದೇ ಅಲ್ಲ. ಸಾಧನೆಯೆಂದರೆ ನಿನ್ನಿಂದ ಯಾರಿಗೂ ತೊಂದರೆಯಾಗದಂತೆ ಬದುಕುವುದು."

Comments
Post a Comment