ಶ್ರದ್ಧಾ ಜ್ಞಾನಂ ದದಾತಿ "ಶ್ರದ್ಧಾ ಜ್ಞಾನಂ ದದಾತಿ"ಅಂದರೆ,ಶ್ರದ್ಧೆ ಜ್ಞಾನವನ್ನು ಕೊಡುತ್ತದೆ.ನಿಜ.. ಜ್ಞಾನ ಬೇಕೆಂದರೆ ಶ್ರದ್ಧೆ ಹಾಗೂ ಏಕಾಗ್ರತೆ ಇರಲೇಬೇಕು."ಶ್ರದ್ಧಾವಾನ್ ಲಭತೇ ಜ್ಞಾನಮ್"ಶ್ರದ್ಧಾವಂತರು ಮಾತ್ರ ಜ್ಞಾನದಲ್ಲಿ ಪರಿಪೂರ್ಣತೆಯನ್ನು ಹೊಂದುತ್ತಾರೆ. ಹಾಗೇ ಜ್ಞಾನದ ಮೂಲಕ ಪರಮಶಾಂತಿಯನ್ನು ಗಳಿಸುತ್ತಾರೆ."ಜ್ಞಾನಂ ಲಬ್ಧ್ವಾ ಪರಾಶಾಂತಿಂ ಅಚಿರೇಣಾಧಿಗಚ್ಛತಿ"ಪ್ರಪಂಚದಲ್ಲಿರುವ ಸಕಲ ಚರಾಚರಗಳ ಅಸ್ತಿತ್ವವಿರುವುದು ಶ್ರದ್ಧೆಯಲ್ಲೇ.ಋಗ್ವೇದದ ಶ್ರದ್ಧಾಸೂಕ್ತ ಶ್ರದ್ಧೆಯ ಮಹತ್ವವನ್ನು ಸುಂದರವಾಗಿ ತಿಳಿಸುತ್ತದೆ. ಪಂಚಭೂತಗಳ ಇರುವಿಕೆಯಿರುವುದು ಶ್ರದ್ಧೆಯಲ್ಲೇ,"ಶ್ರದ್ಧಯಾಗ್ನಿಃ ಸಮಿಧ್ಯತೇ ಶ್ರದ್ಧಯಾ ವಿಂದತೇ ಹವಿಃ" ಅಗ್ನಿ ಉರಿಯುವುದು ಶ್ರದ್ಧೆಯಿಂದ.ಅಗ್ನಿಗೆ ಹವಿಸ್ಸನ್ನು ಅರ್ಪಿಸುವುದು ಶ್ರದ್ಧೆಯಿಂದ,ಸೂರ್ಯ,ಚಂದ್ರರು ಬೆಳಕನ್ನು ನೀಡುವುದು ಶ್ರದ್ಧೆಯಿಂದ.ಆಗಸ ಮಳೆ ಸುರಿಸುವುದು ಶ್ರದ್ಧೆಯಿಂದ.ದಾನ-ಧರ್ಮಗಳನ್ನು ಮಾಡಬೇಕಾದ್ದೂ ಶ್ರದ್ಧೆಯಿಂದ.ಯಾರು ಪರಿಪೂರ್ಣ ಶ್ರದ್ಧೆಯಿಂದ ತನ್ನ ಕಾರ್ಯವನ್ನು ಮಾಡುತ್ತಾರೋ ಅಂತವರಿಗೆ ಕಾರ್ಯಫಲ ಸಿದ್ಧಿಯಾಗುತ್ತದೆ. ಜ್ಞಾನ ಸುಲಭವಾಗಿ ಗಳಿಸುವಂತದ್ದಲ್ಲ.ಹಣದಿಂದ ಖರೀದಿಸಲು ಸಾಧ್ಯವಾಗುವಂತದ್ದಲ್ಲ.ಜ್ಞಾನವನ್ನು ಗಳಿಸಬೇಕೆಂದರೆ ಒಬ್ಬ ಯೋಗ್ಯ ಗುರುವನ್ನು ಆಯ್ಕೆ ಮಾಡಿಕೊಳ್ಳಬೇಕು."ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ".ಶ್...